ಕುಶಲ ಕೈಗಾರಿಕೆ

ಕರಕೌಶಲ ಪ್ರಯೋಗದಿಂದ, ಆಕರ್ಷಕವೂ ಉಪಯುಕ್ತವೂ ಆದ ಪದಾರ್ಥಗಳ ತಯಾರಿಕೆ (ಹ್ಯಾಂಡಿಕ್ರ್ಯಾಫ್ಟ್ಸ್). ಪ್ರಾಚೀನಕಾಲದಿಂದಲೂ ಬೆಳೆದುಬಂದಿರುವ ಕೈಕಸಬು. ದೈಹಿಕ ದುಡಿಮೆ, ಪ್ರಧಾನವಾದ ಸಣ್ಣ ಕೈಗಾರಿಕೆ, ಕರಕೌಶಲ ವಿನ್ಯಾಸ-ಎರಡಕ್ಕೂ ಈ ಶಬ್ದವನ್ನು ಅನ್ವಯಿಸಲಾಗುತ್ತದೆ. ಗೃಹಕೈಗಾರಿಕೆ ಮತ್ತು ಕರಕೌಶಲಗಳು ಪರಸ್ಪರ ಪೂರಕ. ಅನೇಕ ವೇಳೆ ಇವೆರಡರ ನಡುವೆ ಗೆರೆ ಎಳೆಯುವುದು ಅಸಾಧ್ಯ. ಆದರೆ ಒಂದೊಂದೂ ವೈಶಿಷ್ಟ್ಯಪೂರ್ಣವಾದವು. ಪ್ರಾಚೀನ ನಾಗರಿಕತೆಗಳಲ್ಲಿ ಕುಶಲಕಲೆ ಮತ್ತು ಕೈಗಾರಿಕೆಗಳಿಗೆ ಅಷ್ಟಾಗಿ ಭೇದ ಇರಲಿಲ್ಲ. ಗ್ರೀಕರ ಕಾಲದ ಕೆತ್ತನೆ ಮತ್ತು ವಾಸ್ತುಶಿಲ್ಪ ಕಲೆಗಳ ಪಳೆಯುಳಿಕೆಗಳು. ಚೀನದ ಕುಶಲ ಕೆಲಸಗಾರರ ಕಲಾನೈಪುಣ್ಯವನ್ನು ಪ್ರತಿಬಿಂಬಿಸುವ ಕೆಲವು ವಸ್ತುಗಳು ಮಧ್ಯಯುಗದವೆಂದು ಗುರುತಿಸಲಾಗಿರುವ ಗಾಜಿನ ಕಿಟಕಿಗಳು ಮೊದಲಾದವು ಕೈಕಸಬಿನ ಕಾರ್ಯನೈಪುಣ್ಯವನ್ನೂ ಕುಶಲಕಲೆಯ ಪ್ರೌಢಿಮೆಯನ್ನೂ ಎತ್ತಿ ತೋರಿಸುತ್ತವೆ. ಇಲ್ಲೂ ಕೈಗಾರಿಕೆ ಮತ್ತು ಕುಶಲಕಲೆಗಳಿಗಿರುವ ವ್ಯತ್ಯಾಸ ಕಂಡುಬರುವುದಿಲ್ಲ. ಆದರೆ ಕಾಲಕ್ರಮದಲ್ಲಿ ಕುಶಲಕಲೆಗಳೂ ಉಪಯುಕ್ತತೆ ಮತ್ತು ವಾಣಿಜ್ಯ ದೃಷ್ಟಿಯಿಂದ ಕೈಕೊಳ್ಳುವ ಕಲೆಗಳೂ ಬೆಳೆದುವು. ಅವುಗಳ ಕಾರ್ಯಕ್ಷೇತ್ರ ವಿಶಾಲವಾದಂತೆ ಅವುಗಳ ನಡುವಣ ವ್ಯತ್ಯಾಸಗಳೂ ಎದ್ದು ಕಾಣುವಂತಾಯಿತು. ಪ್ರಾಚೀನಕಾಲದ ಕೆಲವು ಕುಶಲವಸ್ತುಗಳು ಉಪಯುಕ್ತತೆ ಮತ್ತು ಸೌಂದರ್ಯಗಳ ದೃಷ್ಟಿಯಿಂದ ಆಧುನಿಕ ಸರಕುಗಳಿಗಿಂತ ಎಷ್ಟೋ ಪಾಲು ಕಳಪೆಯಾಗಿವೆ. ಆದರೂ ಅವುಗಳಲ್ಲಿ ಕಂಡುಬರುವ ಕುಶಲತೆ ಆಯಾ ಕೆಲಸಗಾರನ ಕರಕೌಶಲದ ಫಲವೇ ಆಗಿದೆ.

ಕೈಗಾರಿಕಾ ಕ್ರಾಂತಿ ಪ್ರಾರಂಭವಾಗುವುದಕ್ಕೆ ಮುಂಚೆ ಜನಕ್ಕೆ ಅವಶ್ಯವಾದ ಪದಾರ್ಥಗಳೆಲ್ಲ ಕೈಕೆಲಸದ ಫಲವೇ ಆಗಿದ್ದುವು. ಯಂತ್ರಗಳಿಂದ ಉತ್ಪಾದನೆ ಆರಂಭವಾದ ಮೇಲೆ ಉತ್ಪಾದನ ವ್ಯವಸ್ಥೆಯಲ್ಲಿ ಮನುಷ್ಯ ಹಾಗೂ ಪ್ರಾಣಿಗಳ ಶ್ರಮ ಶಕ್ತಿಯ ಪಾತ್ರ ಕಡಿಮೆಯಾಯಿತು. ಪ್ರಾಚೀನ ಜನಾಂಗಗಳ ಬಹುಮುಖ್ಯ ಕಸಬುಗಳೆಂದರೆ ಆಹಾರೋತ್ಪಾದನೆ, ಉಡುಪು ತಯಾರಿಕೆ ಮತ್ತು ವಸತಿನಿರ್ಮಾಣ ಕಾರ್ಯಗಳು. ಈ ಕೆಲಸಗಳನ್ನು ಪ್ರಥಮತಃ ಸ್ತ್ರೀಯರೇ ಪ್ರಾರಂಭಿಸಿದರೂ ಇವಕ್ಕೆ ಮನುಷ್ಯನ ಆರ್ಥಿಕ ವಿಕಾಸದ ವಿವಿಧ ಯುಗಗಳನ್ನು ಅವಲೋಕಿಸಿದಾಗ ಈ ಅಂಶ ಸ್ಪಷ್ಟಪಡುತ್ತದೆ. ಹಳೆ ಮತ್ತು ಹೊಸ ಶಿಲಾಯುಗಗಳಲ್ಲಿ ಮನುಷ್ಯ ಉಪಯೋಗಿಸುತ್ತಿದ್ದ ಸಲಕರಣೆಗಳು, ಬೇಟೆಗಾರಿಕೆಯ ಅಥವಾ ಅಲೆಮಾರಿ ಜೀವನದ ಹಂತದಲ್ಲಿ ಮಾನವ ತನ್ನ ಹಸಿವೆಯನ್ನು ಇಂಗಿಸಿಕೊಳ್ಳಲು ಪ್ರಾಣಿ ಹಾಗೂ ಮೀನುಗಳನ್ನು ಕೊಲ್ಲುತ್ತಿದ್ದ ವಿಧಾನ, ಅಲ್ಲಿ ಉಪಯೋಗಿಸಲಾಗುತ್ತಿದ್ದ ಸಾಧನಗಳು, ಪಶುಪಾಲನೆಯ ಯುಗದಲ್ಲಿ ಆತ ಪ್ರಾಣಿಗಳ ಚರ್ಮದಿಂದ ತಯಾರಿಸಿಕೊಳ್ಳುತ್ತಿದ್ದ ಕವಚ, ಹೂಡುತ್ತಿದ್ದ ಗುಡಾರ ಮತ್ತು ಅದಕ್ಕೆ ಅಗತ್ಯವಾದ ಸಲಕರಣೆ, ಕೃಷಿಯುಗದಲ್ಲಿ ಮನುಷ್ಯ ನೆಲವನ್ನು ಅಗೆದು ಕಾಳುಗಳನ್ನು ಚೆಲ್ಲಲು ಬಳಸಿಕೊಂಡ ಮರಮುಟ್ಟು ಹಾಗೂ ಅನುಸರಿಸಿದ ವಿಧಾನ-ಇವೆಲ್ಲವೂ ಮನುಷ್ಯನ ಕುಶಲ ಕೆಲಸದ ಜಾಣ್ಮೆಯನ್ನು ಎತ್ತಿ ತೋರಿಸುತ್ತವೆ. ಈ ಯುಗದಲ್ಲಿ ಸ್ತ್ರೀಯೇ ಹಲವಾರು ಕಲೆಗಳನ್ನು ಬೆಳಕಿಗೆ ತಂದರೂ ಅವನ್ನು ಅಭಿವೃದ್ಧಿಪಡಿಸಲು ವಿವಿಧ ವಿಧಾನ ಮತ್ತು ಸಲಕರಣೆಗಳನ್ನು ಕಂಡುಹಿಡಿದು ಅಳವಡಿಸಿದವನು ಪುರುಷ. ಹೀಗೆ ಕ್ರಮೇಣ ಆವಶ್ಯಕತೆಗನುಗುಣವಾಗಿ ಹಲವಾರು ವಸ್ತುಗಳ ಉತ್ಪಾದನೆ ಅನಿವಾರ್ಯವಾಯಿತು. ಇದು ಕರಕೌಶಲ ಸರಕುಗಳ ತಯಾರಿಕೆಗೆ ದಾರಿ ಮಾಡಿಕೊಟ್ಟಿತು. ಪೂರ್ವಕಾಲದಲ್ಲಿ ಕುಶಲ ಕೈಗಾರಿಕೆಗಳು ಬಹಳ ಮಟ್ಟಿಗೆ ಮಾಂತ್ರಿಕ ಹಾಗೂ ಧಾರ್ಮಿಕ ಪ್ರಭಾವಗಳಿಗೆ ಒಳಗಾಗಿದ್ದುವು. ಕುಶಲಕರ್ಮಿಗಳು ಪ್ರಾರಂಭಿಸುವ ಪ್ರತಿಯೊಂದು ಕೆಲಸವೂ ಕೆಲವು ನಿರ್ದಿಷ್ಟ ವಿಧಿಗಳಿಗೆ ಅನುಗುಣವಾಗಿ ನಡೆಯುತ್ತಿತ್ತು. ಪ್ರಾಚೀನ ನಾಗರಿಕತೆ ಹಾಗೂ ಸಂಸ್ಕøತಿಗಳ ಕೇಂದ್ರಗಳೆನಿಸಿದ ಭಾರತ, ಚೀನ, ಜಪಾನ್, ಈಜಿಪ್ಟ್ ಮೊದಲಾದ ದೇಶಗಳ ಕುಶಲ ಕೆಲಸಗಳಲ್ಲಿ ಈ ಅಂಶವನ್ನು ಕಾಣಬಹುದು.

ಪ್ರಾಚೀನ ಸಮಾಜಗಳಲ್ಲಿ ಕುಶಲ ಕೆಲಸಗಾರ ತನ್ನ ಪ್ರತಿಭೆ ಕೌಶಲ ದಕ್ಷತೆಗಳನ್ನು ಕಲಾಕೃತಿ ರಚನೆ ಅಥವಾ ಸರಕು ಉತ್ಪಾದನೆಯಲ್ಲಿ ತೋರಿಸಿದರೆ ಅವನನ್ನು ಸನ್ಮಾನಿಸಿ ಪ್ರೋತ್ಸಾಹಿಸುವ ಸಂಪ್ರದಾಯ ಇತ್ತು. ಅವನಿಗೆ ಕಾಯಂ ಆದ ಕೆಲಸದ ಭರವಸೆ ಇರುತ್ತಿತ್ತು. ಇದರಿಂದ ಕುಶಲಕರ್ಮಿ ವಿವಿಧ ವಿನ್ಯಾಸ ಮತ್ತು ಆಕೃತಿಗಳ ರಚನೆಯಲ್ಲಿ ತನ್ನ ಗಮನವನ್ನು ಕೇಂದ್ರೀಕರಿಸುತ್ತಿದ್ದ. ಆತ ತಯಾರಿಸುತ್ತಿದ್ದ ವಸ್ತುಗಳಿಗೆ ಬೇಡಿಕೆ ಹೆಚ್ಚಿ ಉತ್ಪಾದನೆಯೂ ಹೆಚ್ಚುತ್ತಿತ್ತು. ಶ್ರಮವಿಭಜನೆ ಮತ್ತು ವಿಶೇಷ ಪ್ರಾವೀಣ್ಯ ಬೆಳೆದಂತೆ ಕುಶಲ ಕೈಗಾರಿಕೆಗಳ ವ್ಯಾಪ್ತಿಯೂ ಹೆಚ್ಚಿತು. ಕುಶಲ ಕೈಗಾರಿಕೆಗಳ ಬೆಳೆವಣಿಗೆಯಿಂದ ಮಾರುಕಟ್ಟೆ ವಿಸ್ತಾರಗೊಂಡಿತು. ವ್ಯಾಪಾರಾಭಿವೃದ್ಧಿಯಿಂದ ಕುಶಲ ಕೆಲಸಗಾರರ ಪ್ರಾಮುಖ್ಯ ಹೆಚ್ಚಿ ಅವರ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗತಿಗಳು ಉತ್ತಮಗೊಂಡುವು. ಕುಶಲ ಕೆಲಸಗಾರರು ವೃತ್ತಿಸಂಘ ಅಥವಾ ಶ್ರೇಣಿಗಳನ್ನು ಸ್ಥಾಪಿಸಿಕೊಂಡು ಅವುಗಳ ಮೂಲಕ ತಮಗೂ ತಮ್ಮವರಿಗೂ ಎಲ್ಲ ರೀತಿಯ ರಕ್ಷಣೆಯನ್ನೂ ದೊರೆಕಿಸಿಕೊಂಡರು. ಈ ಶ್ರೇಣಿಗಳು ಕುಶಲಕೆಲಸಗಾರರ ಮಕ್ಕಳಿಗೆ ಆಯಾ ವೃತ್ತಿ ಅಥವಾ ಉದ್ಯೋಗಗಳಲ್ಲಿ ಅಗತ್ಯವಾದ ತರಬೇತಿ ಕೊಡುತ್ತಿದ್ದವು. ಕೈಕಸಬು ಶ್ರೇಣಿಗಳು ತಮ್ಮ ಸದಸ್ಯರಾದ ಕುಶಲ ಕೆಲಸಗಾರರು ತೀರಿಕೊಂಡಾಗ ಅವರ ಹೆಂಡತಿ ಮಕ್ಕಳ ಭವಿಷ್ಯದ ಹೊಣೆಯನ್ನು ಸಹ ವಹಿಸಿಕೊಳ್ಳುತ್ತಿದ್ದುವು. ಮಾರುಕಟ್ಟೆಯಲ್ಲಿ ಏಕಸ್ವಾಮ್ಯ ಸ್ಥಾಪನೆ ಮಾಡಿದ್ದಲ್ಲದೆ ಬೇರೆ ಕಡೆಯಿಂದ ಬಂದ ಸ್ಪರ್ಧೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ಕೆಲಸವನ್ನೂ ಮಾಡುತ್ತಿದ್ದುವು. ಹೀಗೆ ಕಲೆ, ಉದ್ಯೋಗ ಮತ್ತು ಕೈಗಾರಿಕೆಗಳು ವಂಶ ಪಾರಂಪರ್ಯವಾಗಿ ಬೆಳೆದುಕೊಂಡು ಬರಲು ಈ ಶ್ರೇಣಿಗಳು ಸಹಾಯಕವಾಗಿದ್ದುವು.

ಹದಿನೆಂಟನೆಯ ಶತಮಾನದ ಉತ್ತರಾರ್ಧದಲ್ಲಿ ಪ್ರಾರಂಭವಾದ ಯಂತ್ರಯುಗದಿಂದ ಕುಶಲ ಕೈಗಾರಿಕಾಭಿವೃದ್ಧಿ ತಡೆಬಿತ್ತು. ಆದರೂ ಕುಶಲ ಕೈಗಾರಿಕೆಯ ಪ್ರಮುಖ ಲಕ್ಷಣವಾದ ಕಲಾನೈಪುಣ್ಯ, ಜಾಣ್ಮೆ ಮತ್ತು ವಿನ್ಯಾಸ ಅಧಿಕ ಪ್ರಮಾಣದ ಉತ್ಪಾದನೆಯಲ್ಲಿ ಉಳಿದುಕೊಂಡುವು. ಇಂದು ಯಂತ್ರಶಕ್ತಿ ಅಥವಾ ವಿದ್ಯುಚ್ಛಕ್ತಿಯ ಸಹಾಯದಿಂದ ಸರಕುಗಳನ್ನು ಕೈಯಿಂದ ತಯಾರಿಸುವುದನ್ನೂ ಕುಶಲ ಕೆಲಸಗಾರನೆಂದು ಕರೆಯುವ ವಾಡಿಕೆಯಿದೆ. ಹೊಸ ಯಂತ್ರೋಪಕರಣಗಳನ್ನು ಕಂಡುಹಿಡಿದಂತೆಲ್ಲ ಕುಶಲ ಕೈಗಾರಿಕೆಯ ವಿಧಾನವೂ ಬದಲಾವಣೆಯಾಗುತ್ತ ಬಂದಿದೆ. ಕೈಗಾರಿಕೆ ಯಾಂತ್ರೀಕೃತವಾದಂತೆ ಕುಶಲ ಕೆಲಸದ ಅಸ್ತಿತ್ವ ಕುಗ್ಗುತ್ತ ಬಂದಿದೆಯಲ್ಲದೆ ಉತ್ಪಾದನ ವ್ಯವಸ್ಥೆಯಲ್ಲಿ ಕುಶಲಕರ್ಮಿಯ ಪ್ರಾಮುಖ್ಯ ಕಡಿಮೆಯಾಗುತ್ತ ನಡೆದಿದೆ. ಜಟಿಲವಾದ ಬೃಹತ್ ಕೈಗಾರಿಕಾ ವ್ಯವಸ್ಥೆಯಲ್ಲಿ ಕುಶಲಕರ್ಮಿಯ ಜಾಣ್ಮೆಗೆ ಸಾಕಷ್ಟು ಎಡೆ ಇಲ್ಲದಂತಾಗಿದೆ. ಆತ ಕೇವಲ ನಿಕೃಷ್ಟನಾದ ಅಲಕ್ಷ್ಯಕ್ಕೊಳಗಾದ ಅಂಶವಾಗಿ ಪರಿಣಮಿಸಿದ್ದಾನೆ.

ಕೈಗಾರಿಕಾ ಕ್ರಾಂತಿಯ ಪರಿಣಾಮವಾಗಿ ಕುಶಲ ಕೈಗಾರಿಕೆಗಳ ಸ್ಥಿತಿ ಹದಗೆಟ್ಟು, ಕುಶಲ ಕೆಲಸಗಳಿಂದ ಜೀವಿಸುತ್ತಿದ್ದವರ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗತಿಗಳು ಶೋಚನೀಯ ಮಟ್ಟಕ್ಕಿಳಿದಾಗ ಇಂಥ ಪರಿಸ್ಥಿತಿಯನ್ನು ಗಮನಿಸಿದ ಕೆಲವು ಕುಶಲ ಕೈಗಾರಿಕಾ ಪ್ರೇಮಿಗಳು ಅವುಗಳ ಉಳಿವಿಗಾಗಿ ಶ್ರಮಿಸಲು ಕರಕೌಶಲ ಚಳವಳಿಯೊಂದನ್ನು ನಡೆಸಿದರು. ಈ ಚಳವಳಿ ಪ್ರಾಚೀನ ಸಂಸ್ಕøತಿಯನ್ನು ಪ್ರತಿಬಿಂಬಿಸುವ ಕಲಾ ವೈವಿಧ್ಯವುಳ್ಳ ಕುಶಲ ಕೈಗಾರಿಕೆಗಳ ಪುನರುಜ್ಜೀವನದ ಬಗ್ಗೆ ಜನರ ಗಮನ ಸೆಳೆಯುವುದರಲ್ಲಿ ಮತ್ತು ಸರ್ಕಾರದ ನೆರವು ದೊರಕಿಸಿಕೊಡುವುದರಲ್ಲಿ ಬಹುಮಟ್ಟಿಗೆ ಯಶಸ್ಸುಗಳಿಸಿತು. ಇದು ಪ್ರಪಂಚದ ನಾನಾ ದೇಶಗಳಲ್ಲಿ ಒಂದೇ ಕಾಲದಲ್ಲಿ ಪ್ರಾರಂಭವಾಗಲಿಲ್ಲ. 19ನೆಯ ಶತಮಾನದ ಪ್ರಾರಂಭದ ವೇಳೆಗೆ ಎಲ್ಲ ದೇಶಗಳಲ್ಲೂ ವ್ಯಾಪಿಸಿತ್ತು. ಈ ಚಳವಳಿ ಯಾಂತ್ರೀಕರಣದ ತೀವ್ರತೆ ಹಾಗೂ ಅಬ್ಬರವನ್ನು ಸ್ವಲ್ಪಮಟ್ಟಿಗಾದರೂ ತಡೆಗಟ್ಟುವುದರಲ್ಲಿ ಯಶಸ್ವಿಯಾಯಿತು. ಇಂಗ್ಲೆಂಡಿನಲ್ಲಿ ಜಾನ್ ರಸ್ಕಿನ್, ವಿಲಿಯಂ ಮಾರಿಸ್ ಮೊದಲಾದವರು ಯಂತ್ರದಿಂದ ತಯಾರಾದ ಅಂದವಿಲ್ಲದ ಸರಕುಗಳ ಬಗ್ಗೆ ಆಗ್ರಹ ವ್ಯಕ್ತಪಡಿಸಿ ಆರೋಪಣೆಗಳನ್ನು ಮಾಡುತ್ತಾ ಅವುಗಳ ಬಳಕೆಯನ್ನು ಬಹಿಷ್ಕರಿಸುವಂತೆ ಜನರಿಗೆ ಮನವಿ ಮಾಡಿಕೊಳ್ಳುತ್ತಿದ್ದರು. ಸ್ವೀಡನಿನಲ್ಲಿ ಆರ್ಥರ್ ಹ್ಯಾಜೆಲಿಯಸ್ ಕರಕೌಶಲವಸ್ತು ತಯಾರಿಕೆಯ ಪುನರುಜ್ಜೀವನಕ್ಕಾಗಿ ದುಡಿದ ಪ್ರವರ್ತಕರಲ್ಲಿ ಮೊದಲಿಗ. ಈತ ಬಹು ಸುಂದರವಾದ ಪ್ರಾಚೀನ ಕುಶಲ ಮಾದರಿಗಳನ್ನು ಕಲೆಹಾಕಿದ. ಸ್ವೀಡನಿನ ರಾಷ್ಟ್ರೀಯ ಮತ್ತು ಸ್ಥಳೀಯ ಕೃಷಿ ಸಂಘಗಳು ಗೃಹ ಕೈಗಾರಿಕೆಗಳ ಅಭಿವೃದ್ಧಿಯ ಬಗ್ಗೆ ಹೆಚ್ಚು ಆಸಕ್ತಿ ವಹಿಸತೊಡಗಿದುವು. ಇದರ ಫಲವಾಗಿ ಸ್ವೀಡಿಷ್ ಕುಶಲ ಕೈಗಾರಿಕಾ ಸಂಸ್ಥೆ ಸ್ಥಾಪಿತವಾಯಿತು. ಪ್ರಾಚೀನಕಾಲದ ನಮೂನೆಯ ಕರಕೌಶಲ ವಸ್ತುಗಳನ್ನು ಪುನಃ ಉತ್ಪಾದಿಸುವ ಪ್ರಯತ್ನಗಳನ್ನು ಇದು ತ್ವರಿತಗೊಳಿಸಿತು. ದೇಶಾದ್ಯಂತ ಹಲವಾರು ಕುಶಲ ಕೈಗಾರಿಕಾ ಸಂಘಗಳು ಹುಟ್ಟಿಕೊಂಡುವು. ಇವು ಗೃಹ ಕೈಗಾರಿಕಾಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಿದುವು. 20 ನೆಯ ಶತಮಾನದ ಪ್ರಾರಂಭದಲ್ಲಿ ಕುಶಲ ಕೈಗಾರಿಕಾ ಚಳವಳಿ ಬಿರುಸಾಗಿ, ಸ್ವೀಡನ್ನಿನ ಕುಶಲ ಕೈಗಾರಿಕೆಗಳ ಮಹಾಸಂಸ್ಥೆ 1912ರಲ್ಲಿ ಸ್ಥಾಪಿತವಾಯಿತು. ಇದು ಗೃಹ ಕೈಗಾರಿಕಾಭಿವೃದ್ಧಿ ಚಳವಳಿಯಲ್ಲಿ ಪ್ರಶಂಸಾರ್ಹ ಪಾತ್ರ ವಹಿಸಿತು. ಈ ಸಂಸ್ಥೆ ಪದಾರ್ಥಗಳ ಉತ್ಪಾದನೆ, ಪೂರೈಕೆ, ಸರಬರಾಜು ಮೊದಲಾದ ವಹಿವಾಟುಗಳನ್ನು ಸುವ್ಯವಸ್ಥಿತ ರೀತಿಯಿಂದ ನಡೆಸಿಕೊಂಡು ಬರುವ ಸಾಮಥ್ರ್ಯ ಪಡೆದುಕೊಂಡಿತು. ವಿವಿಧ ಕುಶಲ ಕೆಲಸಗಳಲ್ಲಿ ತರಬೇತಿ ಪಡೆಯಲಪೇಕ್ಷೆಯುಳ್ಳವರಿಗೆ ಅಗತ್ಯವಾದ ಎಲ್ಲ ಸೌಕರ್ಯಗಳನ್ನೂ ಒದಗಿಸಿಕೊಡುತ್ತಿತ್ತು. ಇಂಥ ಏರ್ಪಾಡುಗಳಿಗಾಗಿ ಸರ್ಕಾರ ಅಗತ್ಯವಾದ ಹಣದ ನೆರವನ್ನು ನೀಡುತ್ತಿತ್ತು. ಹೀಗೆ ಸ್ವೀಡನಿನಲ್ಲಿ ಆರಂಭವಾದ ಪುನರುಜ್ಜೀವನ ಚಳವಳಿ ಅಲ್ಲಿಯ ಕುಶಲ ಕೈಗಾರಿಕೆಗಳಿಗೆ ಪ್ರೋತ್ಸಾಹಕವಾಗಿ ಪರಿಣಮಿಸಿ ಅವುಗಳ ಅಸ್ತಿತ್ವವನ್ನು ಕಾಪಾಡಿಕೊಳ್ಳಲು ನೆರವಾಯಿತು.

	ಜರ್ಮನಿಯಲ್ಲಿ ಕೈಗಾರಿಕೀಕರಣ ತಡವಾಗಿ ಪ್ರಾರಂಭವಾಯಿತು. ಆದ್ದರಿಂದ ಇಲ್ಲಿ ಕುಶಲ ಕೈಗಾರಿಕೆಗಳು ಉತ್ತಮ ಸ್ಥಿತಿಯಲ್ಲಿಯೇ ಇದ್ದುವು. ಹತ್ತೊಂಬತ್ತನೆಯ ಶತಮಾನದ ಮಧ್ಯಕಾಲದ ವೇಳೆಗೆ ಉತ್ಪಾದನೆಯ ಕ್ಷೇತ್ರದಲ್ಲಿ ಯಂತ್ರೋಪಕರಣಗಳ ಬಳಕೆ ಹೆಚ್ಚಿತು. ಆದರೂ ಕುಶಲ ಕಲಾವಸ್ತುಗಳಿಗೆ ಬೇಡಿಕೆ ಇದ್ದೇ ಇತ್ತು. ಕುಶಲ ಕೆಲಸಗಾರರು ತಮ್ಮ ಕೈಗಾರಿಕೆಗಳನ್ನು ರಕ್ಷಿಸಿಕೊಳ್ಳಲು ಹೂಡಿದ ಹೋರಾಟದಲ್ಲಿ ಜಯ ಗಳಿಸಿಕೊಂಡರು. ಸರ್ಕಾರ ಕುಶಲ ಕೈಗಾರಿಕಾ ಶ್ರೇಣಿಗಳ ಸ್ಥಾನಮಾನಗಳನ್ನು ನಿರ್ಧರಿಸುವ ಕಾಯಿದೆಯೊಂದನ್ನು ಜಾರಿಗೆ ತಂದಿತು. ಇದರ ಪರಿಣಾಮವಾಗಿ ಅನೇಕ ಕರಕೌಶಲ ಸಂಘಗಳು ತಲೆ ಎತ್ತಿದುವು. ಇವುಗಳ ಏಳಿಗೆಗಾಗಿ ದುಡಿಯುವ ಮಂಡಳಿಯೊಂದು ಸ್ಥಾಪಿತವಾಯಿತು. ಇದು ಜರ್ಮನಿಯ ಕುಶಲ ಕೈಗಾರಿಕಾ ಚಳಚಳಿಯಲ್ಲಿ ಒಂದು ಮಹತ್ವದ ಪಾತ್ರ ವಹಿಸಿತು. ಇದಕ್ಕೆ ಸ್ಫೂರ್ತಿ ನೀಡಿದ ಸಹಕಾರ ಚಳಚಳಿಯೂ ಜರ್ಮನಿಯ ಕುಶಲ ಕೈಗಾರಿಕೆಯ ಪುನರುದ್ಧಾರಕ್ಕಾಗಿ ಕೆಲಸಮಾಡಿತು. ಇದರಿಂದ ಕುಶಲ ಕೈಗಾರಿಕಾಭಿವೃದ್ಧಿ ತೀವ್ರ ಗೊಂಡಿತು. ನಗರಪ್ರದೇಶಗಳಲ್ಲಿ ಸ್ಥಾಪಿತವಾದ ಷೂಲ್ಸ್ - ಡಿಲಿಟ್ಸ್ ಸಹಕಾರ ಸಂಘಗಳಲ್ಲಿದ್ದ ಒಟ್ಟು ಸದಸ್ಯರ ಸಂಖ್ಯೆಯಲ್ಲಿ ಕುಶಲ ಕೆಲಸಗಾರರ ಸಂಖ್ಯೆ ನಾಲ್ಕನೆಯ ಒಂದು ಭಾಗದಷ್ಟಿತ್ತು. ಗ್ರಾಮಾಂತರ ಪ್ರದೇಶಗಳಿಲ್ಲಿದ್ದ ರೈಪೇಸೇ ಸಹಕಾರ ಸಂಘಗಳಲ್ಲಿದ್ದ ಕುಶಲ ಕೆಲಸಗಾರರ ಸದಸ್ಯರ ಸಂಖ್ಯೆ ಅಷ್ಟೊಂದು ಅಧಿಕವಾಗಿಲ್ಲದಿದ್ದರೂ ಅವು ಕರಕೌಶಲ ಸಂಘದಲ್ಲಿದ್ದವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿತ್ತು. ಇದು 1926 ರ ವೇಳೆಗೆ 80 ಲಕ್ಷಕ್ಕೆ ಬೆಳೆದಿತ್ತು. ಅಂದರೆ ಒಟ್ಟಿನಲ್ಲಿ ಸೇ. 12.6 ರಷ್ಟು ಜನ ತಮ್ಮ ಜೀವನೋಪಾಯಕ್ಕೆ ಕುಶಲ ಕೈಗಾರಿಕೆಯನ್ನು ಅವಲಂಬಿಸಿದ್ದರು. ದೇಶದ ಒಟ್ಟು ಜನಸಂಖ್ಯೆಯಲ್ಲಿ ಸುಮಾರು 1/5 ಭಾಗದಷ್ಟು ಜನ ಈ ಉದ್ಯೋಗದಲ್ಲಿ ನಿರತರಾಗಿದ್ದರು ಎಂಬ ಅಂದಾಜಿತ್ತು. 1930ರ ವೇಳೆಗೆ ಕುಶಲ ಕೈಗಾರಿಕಾಗಳ ವ್ಯವಹಾರದ ಮೌಲ್ಯ ದೇಶದ ಒಟ್ಟು ವ್ಯವಹಾರದ ಮೌಲ್ಯದ ಶೇ.16ರಷ್ಟಿತ್ತು. ಇದು ಕುಶಲ ಕೈಗಾರಿಕಾಗಳ ಪ್ರಾಬಲ್ಯ ಹಾಗೂ ಪ್ರಗತಿ ಎಷ್ಟರಮಟ್ಟಿಗೆ ನಡೆದಿತ್ತು ಎಂಬುದನ್ನು ಸ್ಪಷ್ಟಪಡಿಸುತ್ತದೆ. 

	ಭಾರತದಲ್ಲಿ ಕುಶಲ ಕೈಗಾರಿಕೆ ಪುರಾತನ ಕಾಲದಿಂದಲೂ ಬೆಳೆದು ಬಂದಿದೆ. ಇಲ್ಲಿಯ ಕರಕೌಶಲ ವಸ್ತುಗಳು ವಿಶ್ವಾದ್ಯಂತ ಜನರ ಮೆಚ್ಚಿಗೆ ಗಳಿಸಿದ್ದುವು. ಪೂರ್ವಕಾಲದಲ್ಲಿ ನಡೆಯುತ್ತಿದ್ದ ವಿದೇಶಿ ವ್ಯಾಪಾರದಲ್ಲಿ ರಫ್ತು ಸರಕಿನ ಪ್ರಮಾಣ ಹೆಚ್ಚಾಗಿಯೇ ಇತ್ತು. ತುಂಬು ನವಿರಾದ ಢಾಕಾ ಮಸ್ಲಿನ್ ಬಟ್ಟೆ , ಮನಮೋಹಕವಾದ ಕಾಶ್ಮೀರಿ ಶಾಲು, ಅಂದ ಚೆಂದದ ರಾಜಸ್ಥಾನದ ಬೊಂಬೆ, ಚಿತ್ರವಿಚಿತ್ರವಾದ ಲೋಹವಸ್ತು ಹಾಗೂ ಪಾತ್ರೆಗಳು, ಕರ್ಣಾಟಕದ ಸುಂದರವಾದ ದಂತದ ಹಾಗೂ ಗಂಧದ ಕೆತ್ತನೆ ಸಾಮಾನು-ಇವುಗಳ ಶ್ರೇಷ್ಠ ಗುಣಮೌಲ್ಯ ಹಾಗೂ ಕಲಾ ವಿನ್ಯಾಸಗಳು ಪ್ರಸಿದ್ಧವಾಗಿವೆ. ಇಲ್ಲಿ ತಯಾರಾದ ಅನೇಕ ಕರಕೌಶಲ ವಸ್ತುಗಳಿಗೆ ಪ್ರಪಂಚದ ಮಾರುಕಟ್ಟೆಗಳಲ್ಲಿ ಒಳ್ಳೆಯ ಬೇಡಿಕೆ ಇತ್ತು. ಗ್ರಾಮೋದ್ಯೋಗ ಮತ್ತು ಗುಡಿಗಾರಿಕೆ ವೃತ್ತಿಗಳು ಅನೇಕರಿಗೆ ಜೀವನೋಪಾಯಗಳಾಗಿದ್ದುವು. ಆದರೆ ಬ್ರಿಟನಿನ ಕೈಗಾರಿಕಾ ಕ್ರಾಂತಿಯ ಫಲವಾಗಿ ಭಾರತದ ಅನುವಂಶಿಕ ಗೃಹ ಕೈಗಾರಿಕೆಗಳು ಹೀನಸ್ಥಿತಿಗೆ ಬಂದುವು. ಇಂಗ್ಲಿಷರ ಆಡಳಿತ ಧೋರಣೆ, ಉತ್ಪಾದನ ವ್ಯವಸ್ಥೆಯಲ್ಲಿ ಯಂತ್ರೋಪಕರಣಗಳ ಬಳಕೆ, ವಿದೇಶಿ ವಸ್ತುಗಳ ಬಗ್ಗೆ ಜನರಿಗಿದ್ದ ವ್ಯಾಮೋಹ ಇವೇ ಮೊದಲಾದ ಅಂಶಗಳು ಭಾರತದಲ್ಲಿ ಕುಶಲ ಕೈಗಾರಿಕೆಯ ಪ್ರಾಮುಖ್ಯವನ್ನು ಕುಂಠಿತಗೊಳಿಸಿದುವು. ಕಾರ್ಖಾನೆಗಳ ಸ್ಥಾಪನೆಯಿಂದ ಗೃಹ ಕೈಗಾರಿಕೆಗಳು ಮೂಲೆಗೆ ಬಿದ್ದುವು. ಕುಶಲಕರ್ಮಿಗಳು ಪರಾವಲಂಬಿಗಳಾಗಿ ಕೂಲಿಗಾಗಿ ಕೆಲಸಮಾಡುವ ಸ್ಥಿತಿಗಿಳಿದರು. ಹೀಗೆ ಭಾರತದ ಕುಶಲಕೈಗಾರಿಕೆಗಳು ಕ್ರಮೇಣ ನಶಿಸಿದುವು. ಭಾರತದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿಯೇ, ಎಂದರೆ 1947ಕ್ಕೆ ಹಿಂದೆಯೇ, ಕುಶಲ ಕೈಗಾರಿಕೆಗಳನ್ನು ಪುನಶ್ಚೇತನಗೊಳಿಸುವ ಹಲವಾರು ಪ್ರಯತ್ನಗಳು ನಡೆದಿದ್ದುವು. ಆದರೆ ಅವು ಪರಿಣಾಮಕಾರಿ ಕ್ರಮಗಳಾಗಲಿಲ್ಲ. ಗೃಹ ಕೈಗಾರಿಕೆಗಳ ಅಭಿವೃದ್ಧಿ ಸಂಪೂರ್ಣವಾಗಿ ನಿಂತೇಬಿಟ್ಟಿತು. ಸ್ವಾತಂತ್ರ್ಯಾ ನಂತರ ಗ್ರಾಮಗಳ ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕøತಿಕ ಪ್ರಗತಿಯಲ್ಲಿ ಗ್ರಾಮೋದ್ಯೋಗಗಳ ಪ್ರಾಮುಖ್ಯವನ್ನು ಸರ್ಕಾರ ಗಮನಿಸಿತು. ಪ್ರತಿಯೊಂದು ಗ್ರಾಮದಲ್ಲೂ ತಲತಲಾಂತರದಿಂದ ಬೆಳೆದುಬಂದ ಕುಶಲಕೆಲಸವನ್ನು ಪುನರುಜ್ಜೀವನಗೊಳಿಸಲು ಹಲವಾರು ಪರಿಹಾರ ಕ್ರಮಗಳೂ ಸಮಗ್ರ ಯೋಜನೆಗಳೂ ಜಾರಿಗೆ ಬಂದಿವೆ. 1951ರಲ್ಲಿ ಪ್ರಾರಂಭವಾದ ಪಂಚವಾರ್ಷಿಕ ಯೋಜನೆಯಲ್ಲಿ ಕುಶಲ ಕೈಗಾರಿಕೆಗಳ ಅಭಿವೃದ್ದಿಗೆ ಸಾಕಷ್ಟು ಪ್ರಾಶಸ್ತ್ಯ ನೀಡಲಾಗಿದೆ. ಕುಶಲ ಕೈಗಾರಿಕಾಭಿವೃದ್ಧಿಯ ಜವಾಬ್ದಾರಿಯನ್ನು ಅಖಿಲಭಾರತ ಕರಕೌಶಲ ಮಂಡಲಿಗೂ ಗ್ರಾಮ ಹಾಗೂ ಸಣ್ಣ ಕೈಗಾರಿಕೆಗಳ ಪ್ರಗತಿಯನ್ನು ತೀವ್ರಗೊಳಿಸುವ ಹೊಣೆಯನ್ನು ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಗೂ ವಹಿಸಿಕೊಡಲಾಗಿದೆ. ಇವುಗಳ ಜೊತೆಗೆ ರಾಷ್ಟ್ರೀಯ ಸಣ್ಣ ಕೈಗಾರಿಕೆಗಳ ಸಂಸ್ಥೆ ಸಣ್ಣ ಉದ್ಯಮಗಳ ಸ್ಥಾಪನೆಗೆ ಸಹಾಯಮಾಡುತ್ತದೆ. ದೊಡ್ಡ ಕೈಗಾರಿಕೆಗಳಿಗೆ ಅಗತ್ಯವಾದ ಕೆಲವು ಸರಕುಗಳನ್ನು ಪೂರೈಸುವುದು ಮತ್ತು ಕುಶಲ ಕೆಲಸದ ಜಾಣ್ಮೆಯನ್ನು ಪದಾರ್ಥಗಳ ತಯಾರಿಕೆಯಲ್ಲಿ ಬಳಸಿಕೊಂಡ ಸರಕುಗಳ ಗುಣಮಟ್ಟವನ್ನು ಹೆಚ್ಚಿಸುವುದು ಇದರ ಮುಖ್ಯೋದ್ದೇಶ. ಗೃಹಕೈಗಾರಿಕೆಯ ಅಭಿವೃದ್ಧಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸಿಕೊಡುವ ವಿಶೇಷ ಸಂಸ್ಥೆಗಳೇ ಸ್ಥಾಪಿತವಾಗಿವೆ. ಇವೆಲ್ಲವೂ ಭಾರತದ ಕುಶಲ ಕೈಗಾರಿಕೆಗಳ ಪುನರುಜ್ಜೀವನ ಚಳವಳಿಯನ್ನು ಯಶಸ್ವಿಗೊಳಿಸುತ್ತವೆಯೆಂದು ನಂಬಲಾಗಿದೆ. ಸಹಕಾರ ಚಳವಳಿಗೆ ಕುಶಲಕೈಗಾರಿಕೆಗಳ ಅಭಿವೃದ್ಧಿಯನ್ನು ಹೊಂದಿಸುವ ಯತ್ನ ನಡೆಯುತ್ತಿದೆ. 

ಯೂರೋಪಿನ ಇತರ ದೇಶಗಳಲ್ಲೂ ಕುಶಲ ಕೈಗಾರಿಕೆಗಳ ಪ್ರಗತಿಗೆ ಯತ್ನಗಳು ನಡೆದುವು. ಕುಶಲ ಕೈಗಾರಿಕೆಗೆ ಮೀಸಲಾದ ಹಲವಾರು ಸಂಘಗಳು ಪುನರುಜ್ಜೀವನ ಚಳವಳಿಯಲ್ಲಿ ಪ್ರಶಂಸಾರ್ಹ ಪಾತ್ರ ವಹಿಸಿದುವು. ಯೂರೋಪಿನಾದ್ಯಂತ ಪ್ರಾಥಮಿಕ ಕುಶಲ ಕೈಗಾರಿಕಾ ಘಟಕಗಳು ಸಣ್ಣ ಪ್ರಮಾಣದ ಕೈಗಾರಿಕೆಗಳ ಅಭಿವೃದ್ಧಿಯನ್ನು ತ್ವರಿತಗೊಳಿಸುವುದರಲ್ಲಿ ಯಶಸ್ಸು ಸಾಧಿಸಿದುವು. ಆಯಾ ದೇಶಗಳಲ್ಲಿಯ ಕುಶಲ ಕೆಲಸಗಾರರ ಸಂಘಟನೆ ಸ್ವಾವಲಂಬನೆಗಳನ್ನು ಸಾಧಿಸುವ ದೃಷ್ಟಿಯಿಂದ ರಾಷ್ಟ್ರೀಯ ಸಂಯುಕ್ತ ಕುಶಲ ಕೆಲಸಗಾರರ ಮಂಡಳಿಗಳನ್ನು ರಚಿಸಿಕೊಳ್ಳಲಾಗುತ್ತಿತ್ತು. ಇಂಥ ಮಂಡಳಿಗಳು ಆಗಾಗ್ಗೆ ಒಂದೇ ಕಡೆ ಸೇರಿ ಕುಶಲ ಕೈಗಾರಿಕಾಭಿವೃದ್ಧಿ ಹಾಗೂ ಇತರ ಸಮಸ್ಯೆಗಳನ್ನು ಚರ್ಚೆ ಮಾಡುತ್ತಿದ್ದುವು. 1930 ರಲ್ಲಿ ಅಂತರರಾಷ್ಟ್ರೀಯ ಕುಶಲ ಕೆಲಸಗಾರರ ಸಮ್ಮೇಳನವೊಂದು ರೋಂ ನಗರದಲ್ಲಿ ಸಮಾವೇಶಗೊಂಡಿತ್ತು. ಇದರಲ್ಲಿ ಯೂರೋಪಿನ ಹದಿನಾಲ್ಕು ರಾಷ್ಟ್ರಗಳ ಇಪ್ಪತ್ತು ಕರಕೌಶಲ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಕುಶಲ ಕೆಲಸಗಾರರ ಸಂಯುಕ್ತ ಮಂಡಳಿಗಳು ಸಹಕಾರ ತತ್ತ್ವದ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದುವು. ಏಕೆಂದರೆ ಕುಶಲ ಕೈಗಾರಿಕಾಭಿವೃದ್ಧಿಗೆ ಅಗತ್ಯವಾದ ವಿಶಿಷ್ಟ ಸೌಲಭ್ಯಗಳು ದೊರಕುವುದು ಸಾಧ್ಯವಾಗುವುದು ಸಹಕಾರ ವ್ಯವಸ್ಥೆಯೊಂದರಿಂದಲೇ ಎಂಬುದು ಮನದಟ್ಟಾಗಿತ್ತು. ಕುಶಲ ಕೆಲಸಗಾರರ ಸಂಸ್ಥೆಗಳ ಚಟುವಟಿಕೆಗಳು ಎಲ್ಲ ದೇಶಗಳಲ್ಲೂ ಒಂದೇ ತೆರನಾಗಿಲ್ಲದಿದ್ದರೂ ಕುಶಲ ಕೈಗಾರಿಕೋತ್ಪನ್ನಗಳ ಉತ್ಪಾದನ ವಿಧಾನ ಮತ್ತು ಸರಕುಗಳು ಗುಣಮಟ್ಟವನ್ನು ಉತ್ತಮಪಡಿಸುವುದೇ ಅವುಗಳ ಮುಖ್ಯೋದ್ದೇಶವಾಗಿದೆ. 

ಕುಶಲ ಕೈಗಾರಿಕೆಯ ಬಗ್ಗೆ ನಿಖರವಾದ ಅಂಕಿ ಅಂಶಗಳನ್ನು ನೀಡುವುದು ಕಷ್ಟ ಸಾಧ್ಯ. ಪ್ರತಿಭಾ ಪ್ರಧಾನವಾದ ಕಾರ್ಯದಿಂದ ಆರಂಭವಾಗಿ ಯಂತ್ರೋಪಕರಣಗಳ ಜೋಡಣೆ ಮತ್ತು ಕಾರ್ಖಾನೆಯಲ್ಲಿಯ ಕೈಕೆಲಸದವರೆಗೂ, ತಾಂತ್ರಿಕ ಕಾರ್ಯದಿಂದ ಹಿಡಿದು ದುರಸ್ತಿ ಕೆಲಸದವರೆಗೂ, ಮನೆಯಲ್ಲಿ ತಾನೊಬ್ಬನೇ ಸರಕು ತಯಾರಿಸುವುದರಿಂದ ಹಿಡಿದು ಕಾರ್ಖಾನೆಯಲ್ಲಿ ಇತರರಿಗೆ ಸಹಾಯ ಮಾಡುವವರೆಗೂ ಕಲೆಗಾರನ, ಕುಶಲಕರ್ಮಿಯ ನೈಪುಣ್ಯ ವ್ಯಾಪಿಸಿರುವುದರಿಂದ ಕುಶಲ ಕೈಗಾರಿಕೆಯ ಸ್ವರೂಪ ಮತ್ತು ವ್ಯಾಪ್ತಿಯನ್ನು ನಿರ್ಧರಿಸುವುದು ಅಷ್ಟು ಸುಲಭವಲ್ಲ. ಆದರೂ ಕುಶಲಕರ್ಮಿಯ ಕೆಲಸದ ಕ್ಷೇತ್ರ, ಉದ್ಯಮದ ಗಾತ್ರ ಅಥವಾ ಆಕಾರದ ಆಧಾರದ ಮೇಲೆ ಯಾವುದು ಕುಶಲ ಕೈಗಾರಿಕೆ, ಯಾವುದು ಅಲ್ಲ ಎಂಬುದನ್ನು ನಿರ್ಧರಿಸಬಹುದು. ಅದೂ ಅಷ್ಟೊಂದು ತೃಪ್ತಿಕರ ವಿವರಣೆಯಾಗಲಾರದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕೆಲವು ದೇಶಗಳಲ್ಲಿ ಸಾಧಾರಣವಾಗಿ ಹತ್ತು ಮಂದಿ ಕೆಲಸಗಾರರನ್ನೊಳಗೊಂಡ ಕೆಲಸ ವ್ಯವಸ್ಥೆಯನ್ನು ಕುಶಲ ಕೈಗಾರಿಕೆ ಎಂದು ಹೆಸರಿಸಿದ್ದಾರೆ. ಎಲ್ಲ ಕಾರ್ಯಕ್ಷೇತ್ರಗಳಲ್ಲೂ ಕುಶಲಕರ್ಮಿ ಇರುವುದು ಕೈಗಾರಿಕೋದ್ಯಮದ ಒಂದು ಸಾಮಾನ್ಯ ಲಕ್ಷಣ. ಕೈಗಾರಿಕೆಯಲ್ಲಿ ಮುಂದುವರಿದ ದೇಶಗಳಲ್ಲೂ ಕುಶಲ ಕೆಲಸ ತನ್ನ ಪ್ರಾಮುಖ್ಯವನ್ನು ಉಳಿಸಿಕೊಂಡಿದೆ. ಏಷ್ಯದ ಬಹು ಪಾಲು ಜನ ಇಂದಿಗೂ ಹೆಚ್ಚಾಗಿ ಕುಶಲ ಕೈಗಾರಿಕೆಗಳ ಉತ್ಪನ್ನಗಳನ್ನೆ ಉಪಯೋಗಿಸುತ್ತಾರೆ. ಈ ಪ್ರದೇಶಗಳಲ್ಲಿ ಕಾರ್ಖಾನೆಗಳಲ್ಲಿ ತಯಾರಾದ ಪದಾರ್ಥಗಳ ಬಳಕೆ ಸ್ವಲ್ಪಮಟ್ಟಿಗೆ ಕಡಿಮೆಯೇ ಎಂಬುದು ಇತ್ತೀಚಿನ ಸಮೀಕ್ಷೆಯಿಂದ ಸ್ಪಷ್ಟಪಟ್ಟಿದೆ. ಜಪಾನ್ ಮತ್ತು ಇತರ ಪೌರಸ್ತ್ಯ ದೇಶಗಳಲ್ಲಿ ಕುಶಲ ಕೈಗಾರಿಕೆಗಳು ಹೆಚ್ಚು ಪ್ರಾಮುಖ್ಯ ಪಡೆದಿವೆ. ಹೆಚ್ಚು ಬೆಲೆಬಾಳುವ ವಿವಿಧ ವಿನ್ಯಾಸಗಳ ವಸ್ತುಗಳನ್ನು ಉತ್ಪಾದಿಸುವುದು ಕುಶಲ ಕೈಗಾರಿಕೆಗಳಿಂದ ಮಾತ್ರ ಸಾಧ್ಯವೆಂಬುದು ಸ್ಪಷ್ಟಪಟ್ಟಿದೆ. ಪಾಶ್ಚಾತ್ಯ ದೇಶಗಳಲ್ಲೂ ಕೈಯಿಂದ ನಡೆಸುವ ಸಣ್ಣ ಕೈಗಾರಿಕೆಗಳು ದೊಡ್ಡ ಕೈಗಾರಿಕೆಗಳಿಗೆ ಸಹಾಯಕವಾಗಿರುವುದು ಒಂದು ಗಮನಾರ್ಹ ಸಂಗತಿಯಾಗಿದೆ.

ರಷ್ಯದಲ್ಲಿ ಒಂದನೆಯ ಮಹಾಯುದ್ಧ ಮತ್ತು 1917ರ ಮಹಾಕ್ರಾಂತಿಗೆ ಮೊದಲು ಕುಶಲ ಕೈಗಾರಿಕೆಗಳೇ ಅನುಭೋಗಿ ಸರಕುಗಳನ್ನು ಉತ್ಪಾದಿಸುತ್ತಿದ್ದುವು. ಒಟ್ಟು ಕೆಲಸಗಾರರಲ್ಲಿ 2/3 ಭಾಗದಷ್ಟು ಜನ ಕುಶಲ ಕೆಲಸಗಾರರಾಗಿದ್ದರು. ಕಮ್ಯೂನಿಸ್ಟ್ ಕ್ರಾಂತಿಯ ಅನಂತರ ಆ ದೇಶದ ಆರ್ಥಿಕಾಭಿವೃದ್ಧಿಯಲ್ಲಿ ಕುಶಲ ಕೈಗಾರಿಕೆಯ ಪ್ರಾಮುಖ್ಯವನ್ನು ಹೆಚ್ಚಿಸಲು 1927ರಲ್ಲಿ ಒಂದು ಕಾಯಿದೆಯನ್ನು ಜಾರಿಗೆ ತರಲಾಯಿತು. ನಿರುದ್ಯೋಗ ನಿವಾರಣೆ, ಆವಶ್ಯಕ ವಸ್ತುಗಳ ಪೂರೈಕೆ, ಗ್ರಾಮಪ್ರದೇಶದ ಆರ್ಥಿಕಾಭಿವೃದ್ಧಿಯಲ್ಲಿ ಮೊದಲಾದವನ್ನು ಸಾಧಿಸುವ ಉದ್ದೇಶದಿಂದ ಕುಶಲ ಕೈಗಾರಿಕಾಭಿವೃದ್ಧಿಗೆ ಸಕಲ ಸೌಲಭ್ಯಗಳನ್ನೂ ಒದಗಿಸಿಕೊಡಲಾಯಿತು. 1928 ರಿಂದ ಜಾರಿಗೆ ಬಂದ ಪಂಚವಾರ್ಷಿಕ ಯೋಜನೆಗಳಲ್ಲೂ ಕುಶಲ ಕೈಗಾರಿಕಾಭಿವೃದ್ಧಿಗೆ ವಿಶೇಷ ಗಮನ ಕೊಡಲಾಗಿದೆ. ರಷ್ಯದಲ್ಲಿ ವಿದ್ಯುಚ್ಛಕ್ತಿ ಬಳಸದೆ ಮೂವತ್ತು ಜನ ಕಾರ್ಮಿಕರಿಂದ ಅಥವಾ ವಿದ್ಯುಚ್ಛಕ್ತಿಯನ್ನು ಬಳಸಿಕೊಂಡು, ಹದಿನೈದಕ್ಕಿಂತ ಕಡಿಮೆ ಸಂಖ್ಯೆಯ ಕೆಲಸಗಾರರಿಂದ ಸರಕು ತಯಾರಿಕೆ ನಡೆಯುತ್ತಿದ್ದರೆ ಅಂಥ ಕೆಲಸ ಅಥವಾ ಉದ್ಯಮ ಅಥವಾ ಕೈಗಾರಿಕೆಯನ್ನು ಕುಶಲ ಕೈಗಾರಿಕೆ ಎಂದು ಕರೆಯಲಾಗಿದೆ. 'ರಷ್ಯದಲ್ಲಿ 1930ರ ವೇಳೆಗೆ ಒಟ್ಟು ಕಾರ್ಮಿಕರಲ್ಲಿ ಸೇ. 60ರಷ್ಟು ಮಂದಿ ಸಣ್ಣ ಕೈಗಾರಿಕೆಗಳಲ್ಲಿ ಕೆಲಸಮಾಡುತ್ತಿದ್ದರು. ಅವರು ಉತ್ಪಾದಿಸುತ್ತಿದ್ದ ಸರಕುಗಳ ಮೌಲ್ಯ ದೇಶದ ಒಟ್ಟು ಕೈಗಾರಿಕಾ ಉತ್ಪಾದನೆಯ ಮೌಲ್ಯದ ಸೇ. 21.6 ರಷ್ಟಿತ್ತು. ಚರ್ಮದ ವಸ್ತುಗಳು, ಜವಳಿ, ಮರದ ಸಾಮಾನು, ಬಟ್ಟೆ ತಯಾರಿಕೆ, ಜಮಖಾನೆ ತಯಾರಿಕೆ ಮೊದಲಾದವು ಸಣ್ಣ ಕೈಗಾರಿಕೆಗಳಿಂದಲೇ ನಡೆಯುತ್ತಿದ್ದುವು. ಇವುಗಳಲ್ಲಿ ನಿರತರಾಗಿದ್ದವರಲ್ಲಿ ಸೇ. 25ರಷ್ಟು ಜನ ಗ್ರಾಮ ಪ್ರದೇಶಗಳ ಉದ್ಯಮಗಳಲ್ಲಿದ್ದರು. ಇಂದಿಗೂ ಕುಶಲ ಕೈಗಾರಿಕೆಗಳನ್ನು ಅವಲಂಬಿಸಿರುವವರು ಆರ್ಥಿಕವಾಗಿ ಸಬಲರಾಗಿಯೇ ಇದ್ದಾರೆ. ಸೋವಿಯತ್ ದೇಶದಲ್ಲೂ ಇತರ ದೇಶಗಳಲ್ಲಿರುವಂತೆಯೇ ಸಹಕಾರ ಚಳವಳಿ ಕುಶಲ ಕೈಗಾರಿಕೆಗಳಿಗೂ ನಿಕಟ ಸಂಬಂಧವಿದೆ. ಕುಶಲಕಾರ್ಮಿಗಳಿಗೆ ಅಗತ್ಯವಾದ ಸಮಸ್ತ ಸರಕುಗಳನ್ನೂ ಸಹಕಾರ ಸಂಘಗಳೇ ಒದಗಿಸಿಕೊಡುತ್ತವೆ. ಸಹಕಾರ ಸಂಘಗಳಲ್ಲಿ ಕುಶಲ ಕೆಲಸಗಾರರೇ ಹೆಚ್ಚು ಸದಸ್ಯತ್ವ ಪಡೆದುಕೊಂಡಿದ್ದಾರೆ. 1922 ರಲ್ಲಿ ಸ್ಥಾಪಿತವಾದ ಅಖಿಲ ಸೋವಿಯತ್ ಕುಶಲ ಕೆಲಸಗಾರರ ಸಂಘಗಳ ಸಂಯುಕ್ತ ಸಂಸ್ಥೆ ತನ್ನ ಅಂಗಸಂಸ್ಥೆಗಳಾದ ಆರೆಲ್ಟ್‍ಗಳ ಮೂಲಕ ಕುಶಲ ಕೈಗಾರಿಕೆಗಳಿಗೆ ಬೇಕಾದ ಕಚ್ಚಾ ವಸ್ತುಗಳಿಂದ ಹಿಡಿದು ಯಂತ್ರೋಪಕರಣಗಳವರೆಗೆ ಎಲ್ಲವನ್ನೂ ಪೂರೈಸುತ್ತದೆ. ಸೋವಿಯತ್ ದೇಶದಲ್ಲಿ ಕುಶಲ ಕೈಗಾರಿಕೆಗಳಿಗೆ ಒಳ್ಳೆಯ ಭವಿಷ್ಯವಿದೆ. 

ಇಂದು ಸ್ವತಂತ್ರವಾಗಿ ಕೆಲಸ ಮಾಡುವ ಕುಶಲ ಕೆಲಸಗಾರ ತನ್ನ ಕಾರ್ಯದಕ್ಷತೆಯನ್ನು ನವೀನ ಯಂತ್ರ ಸಾಧನಗಳಿಂದ ಹೆಚ್ಚಿಸಿಕೊಳ್ಳುತ್ತಿದ್ದಾನೆ. ಆದರೆ ಈತ ಕಾರ್ಖಾನೆಗಳಲ್ಲಿ ತಯಾರಾಗುತ್ತಿರುವ ಅಧಿಕ ಮೊತ್ತದ ಒಂದೇ ನಮೂನೆಯ, ಬಾಳಿಕೆ ಬಾರದ, ಅಗ್ಗದ ಬೆಲೆಯ, ಪ್ರಮಾಣೀಕೃತ ವಸ್ತುಗಳ ಪೈಪೋಟಿಯನ್ನು ಎದುರಿಸಬೇಕಾದ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದ್ದಾನೆ. ಸಹಕಾರ ಚಳವಳಿಯನ್ನು ತೀವ್ರಗೊಳಿಸುವುದರಿಂದ ಈ ತೊಂದರೆಗಳನ್ನು ನಿವಾರಿಸಬಹುದು. ಇತ್ತೀಚೆಗೆ ಕೆಲುವು ದೇಶಗಳು ಕುಶಲಕೈಗಾರಿಕೆಗಳನ್ನು ಪುನರುಜ್ಜೀವನ ಗೊಳಿಸುವ ದೃಷ್ಟಿಯಿಂದ ಕರಕೌಶಲ ಉತ್ಪನ್ನಗಳ ತಯಾರಿಕೆಯಲ್ಲಿ ನಿರತರಾಗಿರುವವರಿಗೆ ಅಗತ್ಯವಾದ ಎಲ್ಲ ನೆರವನ್ನೂ ಕೊಡುತ್ತಿವೆ. ಇದರಿಂದ ಗತಕಾಲದ ಕಲೆ, ಸಂಸ್ಕøತಿ ಹಾಗೂ ನಾಗರಿಕತೆಯ ನೆನಪು ಅಲ್ಪಸ್ವಲ್ಪವಾದರೂ ಉಳಿದುಕೊಂಡಂತಾಗುತ್ತದೆ. ಮಧ್ಯಯುಗದಲ್ಲಿ ಕುಶಲ ಕೈಗಾರಿಕಾ ಶ್ರೇಣಿಗಳು ಕುಶಲ ಕೆಲಸಗಾರರಿಗೆ ದೊರಕಿಸಿ ಕೊಡುತ್ತಿದ್ದ ಎಲ್ಲ ಸೌಲಭ್ಯಗಳನ್ನೂ ಆಯಾ ದೇಶಗಳ ಸರ್ಕಾರಗಳು ಒದಗಿಸಿಕೊಡಲು ಪ್ರಯತ್ನ ನಡೆಸುತ್ತಿವೆ. ಆದರೆ ಇಂದು ಕಾರ್ಖಾನೆಯಲ್ಲಿಯ ಕಾರ್ಮಿಕರಿಗೆ ಕಾನೂನಿನ ಪ್ರಕಾರ ದೊರೆಯುವ ವಿಶಿಷ್ಟ ಸೌಲಭ್ಯಗಳಿಂದ ಕುಶಲ ಕೆಲಸಗಾರ ವಂಚಿತನಾಗಿದ್ದಾನೆ. ಸರ್ಕಾರ ಕುಶಲಕರ್ಮಿಗೂ ಸಾಮಾಜಿಕ ಭದ್ರತೆಯ ಸೌಲಭ್ಯಗಳನ್ನು ಒದಗಿಸಿಕೊಡುವುದು ಅತ್ಯಗತ್ಯ. ಇದರಿಂದ ರಕ್ಷಣೆ ಹಾಗೂ ಭದ್ರತೆ ದೊರೆತು ಅವನ ಜೀವನ ಉತ್ತಮಗೊಳ್ಳುತ್ತದೆ. ಕಾರ್ಖಾನೆಯ ಕೆಲಸಗಾರ ಎದುರಿಸುವಂಥ ಸಮಸ್ಯೆಗಳಿಗಿಂತ ಹೆಚ್ಚಿನ ತೊಂದರೆಗಳನ್ನು ಪರಾವಲಂಬಿ ಕುಶಲ ಕೆಲಸಗಾರ ಎದುರಿಸಬೇಕಾಗಿದೆ. ಕಲಾಪ್ರತಿಭೆ ಇದ್ದರೂ ಪರಾಶ್ರಯದಲ್ಲಿ ಕೂಲಿಗಾಗಿ ಕೆಲಸಮಾಡಿ ಜೀವಿಸಬೇಕಾಗಿದೆ. ಸ್ವತಂತ್ರ ಉದ್ಯಮ ಪ್ರಾರಂಭಿಸಲು ಹಣದ ಕೊರತೆ ಎದುರು ನಿಲ್ಲುತ್ತದೆ. ಆದರೆ ಅನುಭೋಗಿ ತಾನು ಅಪೇಕ್ಷಿಸಿದಷ್ಟೇ ಉಪಯುಕ್ತತೆಯುಳ್ಳ ಸರಕುಗಳನ್ನು ಪಡೆಯಬಲ್ಲ. ಒಳ್ಳೆಯ ಸರಕಿಗೆ ತೀರ ಸಮವಾದ ಸರಕು ಕಡಿಮೆ ಬೆಲೆಗೆ ಸಿಕ್ಕಾಗ ಅದರಿಂದ ಅನುಭೋಗಿ ತೃಪ್ತನಾಗುವುದಲ್ಲದೆ ಉಳಿತಾಯವನ್ನೂ ಸಾಧಿಸಿದಂತೆ ಭಾವಿಸುತ್ತಾನೆ. ಸದ್ಯದ ಬಯಕೆ ಈಡೇರಿದರೆ ಸಾಕು: ಸರಕಿನ ಅಂದಚಂದ, ಬಾಳಿಕೆ, ಗುಣಮಟ್ಟಗಳೆಲ್ಲ ಅನಂತರದ ಮಾತು. ಹೀಗೆ ಇಂದು ತಳಕಿನ ಪದಾರ್ಥಗಳ ದಾಳಿಗೆ ತುತ್ತಾಗಿ ಕರಕೌಶಲ ವಸ್ತುಗಳಿಗೆ ಗಿರಾಕಿಗಳು ಕಡಿಮೆಯಾಗಿದ್ದಾರೆ. ಇದರಿಂದ ಕುಶಲ ಕೆಲಸಗಾರನ ಸ್ಥಿತಿ ಹದಗೆಡುತ್ತಿದೆ. 

ಕರಕೌಶಲವನ್ನು ಪರಿಣಾಮಕಾರಿಯಾಗಿಯೂ ಧಾರಾಳವಾಗಿಯೂ ಉಪಯೋಗಿಸಿಕೊಳ್ಳಲು ಆಧುನಿಕ ಕೈಗಾರಿಕೋದ್ಯಮದಲ್ಲಿ ಹೆಚ್ಚು ಅವಕಾಶವಿದೆ. ಸೂಕ್ಷ್ಮತೆ, ಜಾಣ್ಮೆ, ಒಳ್ಳೆಯ ನಮೂನೆ, ಮೋಹಕ ವಿನ್ಯಾಸ, ನಯ, ಮತ್ತು ನಾಜೂಕಿನ ಸರಕುಗಳು ಎಲ್ಲಿ ಉತ್ಪಾದನೆಯಾಗಬೇಕೋ ಅಂಥ ಕಡೆ ಕರಕೌಶಲ ಹಾಗೂ ಯಾಂತ್ರಿಕ ವಿಧಾನ ಎರಡನ್ನು ಹೊಂದಿಸಿಕೊಳ್ಳಬಹುದು, ಉತ್ಪಾದನ ವೆಚ್ಚವನ್ನು ಕಡಿಮೆ ಮಾಡಿಕೊಳ್ಳಬಹುದು. ಆಗ ತಯಾರಾಗುವ ಸರಕಿನ ಗುಣಮೌಲ್ಯ ಶ್ರೇಷ್ಠಮಟ್ಟದ್ದಾಗಿರುತ್ತದೆ. ಅದಕ್ಕೆ ಬೇಡಿಕೆಯೂ ಹೆಚ್ಚುತ್ತದೆ. ಇದರಿಂದ ಕುಶಲಕರ್ಮಿಗಳ ನಿರುದ್ಯೋಗ ಸಮಸ್ಯೆ ನಿವಾರಣೆಯಾಗುತ್ತದೆ. ಈ ದೃಷ್ಟಿಯಿಂದಲೇ ನಾನಾ ದೇಶಗಳು ಉತ್ಪಾದನ ವಿಧಾನದಲ್ಲಿ ಮಾನವಶಕ್ತಿಯ ಮತ್ತು ಇತರ ಬಗೆಯ ಅಪವ್ಯಯಗಳನ್ನು ತಪ್ಪಿಸುವ ಸಲುವಾಗಿ ಸಮನ್ವಯ ವಿಧಾನ ಚಳವಳಿಯನ್ನು ಪ್ರಾರಂಭಿಸಿವೆ. ಉತ್ಪಾದನೆಯಲ್ಲಿ ಕೈ ಹಾಗೂ ಯಂತ್ರ ಶಕ್ತಿಯ ಸಮ್ಮಿಳನ ತುಂಬ ಯಶಸ್ವೀ ವಿಧಾನವಾಗಿದೆ.

(ಕೆ.ಆರ್.ಎನ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ